WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Tuesday, July 24, 2012

ಮಕ್ಕಳ ವೆಬ್ ಸೈಟ್

ಅಬ್ಬಬ್ಬಾ ಅಂದ್ರೆ ಹತ್ತು ವರ್ಷ ವಯಸ್ಸಿನ ಹುಡುಗರು ಏನು ಸಾಧನೆ ಮಾಡ್ಬೋದು? ನೀವೇ ಹೇಳಿ. ಒಂದೋ ಓದಿನಲ್ಲಿ ಮುಂದಿರ್ಬೋದು, ಸಕ್ಕತಾಗಿ ಹಾಡಿ ಟಿವಿ ಶೋನಲ್ಲಿ ಮಿಂಚ್ಬೋದು, ಇಲ್ಲ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೇಜಿಯಾಗಿ ನಮ್ಮನ್ನೂ ಕುಣಿಯೋ ಥರ ಮಾಡಬಹುದು. ಈ ಥರ ಮಕ್ಕಳು ಲಲಿತ ಕಲೆಯಲ್ಲೋ, ಸಾಹಿತ್ಯದಲ್ಲೂ ಮುಂದಿರಬಹುದು, ಆದ್ರೆ 10 ವರ್ಷಕ್ಕೇ ಆಪ್ ಡೆವೆಲಪರ್ ಆಗಿರೋ ವಿಷಯಾನ ಅದರಲ್ಲೂ ಭಾರತದಲ್ಲಿ ಆಗಿರೋ ಹುಡುಗರನ್ನ ನೀವು ಎಲ್ಲಾದ್ರೂ ಕೇಳಿದೀರಾ?
ಬಿಲ್ ಗೇಟ್ಸ್ ಕೂಡ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರೋಗ್ರಾಮ್ ಬರ್ದಿರ್ಲಿಲ್ಲ ಅನ್ಸುತ್ತೆ, ಆ ಥರದ ಸಾಧನೆ ಮಾಡಿದಾರೆ, ಚೆನ್ನೈ ನ ಶ್ರವಣ್ ಹಾಗು ಸಂಜಯ್ ಎಂಬ ಇಬ್ಬರು ಅಣ್ಣ ತಮ್ಮಂದಿರು. ಬಹುಷಃ ಇಂಡಿಯಾದಲ್ಲೇ ಅತ್ಯಂತ ಕಿರಿಯ ಮೊಬೈಲ್ ಆಪ್ ಡೆವೆಲಪರ್ ಗಳು ಎಂಬ ಹೆಗ್ಗಳಿಕೆ ಇವರದಾಗಿದ್ದು,  ಈಗಾಗಲೇ ಐಫೋನ್ ಹಾಗು ಐಪ್ಯಾಡ್ ಗಳಿಗೆ 4 ಆಪ್ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸುಮಾರು 30 ದೇಶಗಳಲ್ಲಿ ಈಗಾಗ್ಲೇ 10 ಸಾವಿರ ಡೌನ್ಲೋಡ್ ಕಂಡಿರುವ ಇವರ ಆಪ್ ಗಳು ಮಕ್ಕಳಿಗೆ ಫೆವರಿಟ್ ಎನಿಸಿವೆ.
ಬಿಲ್ ಗೇಟ್ಸ್ ಹಾಗು ಆಪಲ್ ನ ಸ್ಟೀವ್ ಜಾಬ್ಸ್ ರಿಂದ ಪ್ರೇರಣೆ ಪಡೆದಿರುವ ಶ್ರವಣ್ ಹಾಗು ಸಂಜಯ್ ಗೆ ಮೊದಲು ಕಂಪ್ಯೂಟರ್ ಪರಿಚಯ ಮಾಡಿಸಿದ್ದು, ಸ್ವತಃ ಟೆಕ್ಕಿಯಾಗಿರುವ ಅವರ ತಂದೆ ಕುಮಾರನ್ ಸುರೇಂದ್ರನ್ ಅಂತೆ. ಲ್ಯಾಪ್ಟಾಪ್ ನಿಂದ ಮನೆಯಿಂದಲೇ ಕೆಲವೊಮ್ಮೆ ಕೆಲಸ ಮಾಡುತ್ತಿದ್ದ ಅವರನ್ನು ನೋಡಿ ಸಹಜವಾಗಿಯೇ ಲ್ಯಾಪ್ಟಾಪ್ ಗೆ ಆಕರ್ಷಿತರಾದರಂತೆ ಹುಡುಗರು. ಇವರುಗಳ ಆಸಕ್ತಿಯನ್ನು ನೋಡಿ ದೊಡ್ಡ ಮಗನಾದ ಸಂಜಯ್ ಗೆ ತಂದೆ ಪ್ರೊಗ್ರಾಮಿಂಗ್ ಬಗ್ಗೆ ಹೇಳಿಕೊಟ್ಟಾಗ ಕೇವಲ 7 ವರ್ಷವಷ್ಟೇ!
ಮೂರು ವರ್ಷದಲ್ಲೇ ಕೊಬಾಲ್, ಬೇಸಿಕ್, ಆಬ್ಜೆಕ್ಟಿವ್-C ಕಲಿತ ಈ ಹುಡುಗರು ಗೋ ಡೈಮೆನ್ಶನ್ ಎಂಬ ಕಂಪನಿಯನ್ನು ಪ್ರಾರಂಭಿಸಿ ತಮ್ಮ ಪ್ರೇರಣೆಯಾದ ಬಿಲ್ ಗೇಟ್ಸ್ ಹಾಗು ಸ್ಟೀವ್ ಜಾಬ್ಸ್ ರೀತಿಯಲ್ಲೇ ಬರುವ ಆದಾಯದಲ್ಲಿ 15 % ನಷ್ಟು ವಿದ್ಯಾರ್ಥಿಗಳ ಸಹಾಯಾರ್ಥಕ್ಕಾಗಿ ಮೀಸಲಿಟ್ಟಿದ್ದಾರಂತೆ.
ಈಗಷ್ಟೇ 8 ನೆ ಕ್ಲಾಸ್ ನಲ್ಲಿ ಓದುತ್ತಿರುವ ಅಣ್ಣ ಸಂಜಯ್ ಹಾಗು 6  ನೆ ಕ್ಲಾಸ್ ನಲ್ಲಿ ಒದೂತ್ತಿರುವ ಶ್ರವಣ್, ವಿಶ್ವದಲ್ಲೇ ಹಗುರವಾದ ಟ್ಯಾಬ್ಲೆಟ್ ಅನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು, ಈ ಹುಡುಗರ ಅಸಮಾನ್ಯ ಸಾಧನೆ ಹಲವು ವಿದ್ಯಾರ್ಥಿಗಳಿಗೆ ನಿಜಕ್ಕೂ ಪ್ರೇರಣೆಯಾಗಿದ್ದು, ತಮ್ಮ ಪೋಷಕರಿಗೆ ಮಾದರಿ ಮಕ್ಕಳು ಎನಿಸಿದ್ದಾರೆ.
ಇಂಥ ಮಕ್ಕಳಿಗೆ ಒಂದೊಳ್ಳೆ ಪ್ರೇರಣೆಯ ಮಾತು, ಶುಭ ಹಾರೈಕೆ ಅವರನ್ನು ಮತ್ತಷ್ಟು ಸಾಧನೆ ಮಾಡಲು ಕಿಚ್ಚು ಹತ್ತಿಸುತ್ತದೆ.  www.godimensions.com ಗೆ ಹೋಗಿ ಆ ಮಕ್ಕಳಿಗೆ ಸಣ್ಣದೊಂದು ವಿಶ್ ಮಾಡುತ್ತೀರ ತಾನೇ ?

Saturday, July 21, 2012

ಕನ್ನಡ ಬರೆಯಲೊಂದು ಸ್ಲೇಟ್


  ಕನ್ನಡ ಬರೆಯಲು ಅಂತರ್ಜಾಲದಲ್ಲಿ ಒಂದು ತಾಣ. ನಿಮಗೆ ಸ್ಲೇಟ್ ನಲ್ಲಿ ಬರೆಯುತ್ತಿರುವ ಅನುಭವ ಕೊಡುತ್ತದೆ. ನಿಮ್ಮ ಕಂಪ್ಯೂಟರ್ ನಲ್ಲಿ ಕನ್ನಡ ಸಾಫ್ಟವೇರ್ ಇಲ್ಲದಿದ್ದರೂ ಈ ತಾಣ ಬಳಸಿ ನೀವು ಕನ್ನಡ ಬರೆಯಬಹುದು. ನೀವು ಬರೆದ ಬರಹ ಯುನಿಕೋಡಿನಲ್ಲಿರುತ್ತದೆ. http://www.kannadaslate.com/

ವಾಯುಗುಣ ಬದಲಾವಣೆ - Climate Change

ಜಾಗತಿಕ ತಾಪ ಈಗಾಗಲೇ ನಮ್ಮ ಸುತ್ತಣ ಜಗತ್ತನ್ನು ಬದಲಾಯಿಸುತ್ತಿದೆ. ಈ ಬದಲಾವಣೆಯನ್ನು ಸಂಶೋಧಕರು ಅಳೆದು ಇಂತಿಷ್ಟು ಎಂದು ತೋರಿಸಿಕೊಡಬಲ್ಲರು. ಮುಂದಿನ ದಶಕಗಳಲ್ಲಿ ಇಂಥ ಬದಲಾವಣೆಗಳು ಇನ್ನೂ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತವೆ. ನಿಜ, ಭವಿಷ್ಯದಲ್ಲಿ ಹವಾಗುಣ ಬದಲಾವಣೆಯನ್ನು ತಗ್ಗಿಸಲು ಹಸುರುಮನೆ ಅನಿಲದ ಉತ್ಸರ್ಜನೆಯ ಪ್ರಮಾಣವನ್ನು ತಗ್ಗಿಸುವುದೇ ಆದ್ಯ ಆಯ್ಕೆಯಾಗಬೇಕಾಗಿದೆ. ಆದರೆ ಹಿಂದೆ ವಿಸರ್ಜಿಸಿದ ಅನಿಲಗಳು ಈಗ ಅನಿವಾರ್ಯ ಸಮಸ್ಯೆಯನ್ನು ಸೃಷ್ಟಿಸಿರುವುದರಿಂದ ಯಾವ ಬಗೆಯ ದುಷ್ಪರಿಣಾಮ ತರಬಹುದೆಂಬುದಕ್ಕೆ ಸೂಕ್ತ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಜಗತ್ತಿನ ಎಲ್ಲ ಪ್ರಜೆಗಳಿಗೂ ಹವಾಗುಣ ಬದಲಾವಣೆ ಅವರ ಮೇಲೆ ಯಾವ ಪರಿಣಾಮ ಬೀರಿಬಹುದು, ಅದನ್ನು ನಿಭಾಯಿಸುವುದು ಹೇಗೆ ಎಂಬ ಅರಿವು ಮೂಡಬೇಕು. ಈ ನಿಟ್ಟಿನಲ್ಲಿ ಅಂತರ್ಜಾಲ ತಾಣ ಒಂದು ಸಣ್ಣ ಪ್ರಯತ್ನ. 

ಬಿಳಿಹಲಗೆ

ಶಾಲೆಗಳಲ್ಲಿ ಬಳಸುವ ಕರಿಹಲಗೆ ಗೊತ್ತು. ಅಂತೆಯೇ ಕಚೇರಿಗಳಲ್ಲಿ, ವಿಚಾರಸಂಕಿರಣಗಳಲ್ಲಿ ಬಳಸುವ ಬಿಳಿಹಲಗೆ ಗೊತ್ತು ತಾನೆ? ನೀವು ಬೆಂಗಳೂರಿನಲ್ಲಿ, ನಿಮ್ಮ ಸಹೋದ್ಯೋಗಿ ಅಥವಾ ಸ್ನೇಹಿತ ಅಮೇರಿಕದಲ್ಲಿ, ಮತ್ತೊಬ್ಬ ಜಪಾನ್‌ನಲ್ಲಿ ಕುಳಿತುಕೊಂಡು ಅಂತರಜಾಲವನ್ನು ಬಳಸಿ ವಿಚಾರಗೋಷ್ಠಿ ಮಾಡುವ ಸವಲತ್ತುಗಳು ಹಲವಾರಿವೆ. ಹೆಚ್ಚಿನವು ಪಠ್ಯದ ಮೂಲಕ ಅಥವಾ ಮಾತನಾಡುವ ಮೂಲಕ, ಇನ್ನೂ ಕೆಲವು ಕ್ಯಾಮರಾ ಬಳಸಿ ವೀಡಿಯೋ ಚಾಟ್ ಮಾಡುವ ಸವಲತ್ತುಗಳನ್ನು ನೀಡುತ್ತವೆ. ನೀವು ಯಾವುದೋ ವಿಷಯದ ಬಗ್ಗೆ ಚರ್ಚಿಸುವಾಗ ಚಿತ್ರಗಳ ಮೂಲಕ, ಗೆರೆಗಳ ಮೂಲಕ ಒಬ್ಬರಿಗೊಬ್ಬರಿಗೆ ವಿವರಿಸಬೇಕಾದಾಗ ಏನು ಮಾಡುತ್ತೀರಿ? ಆಗ ನಿಮ್ಮ ಸಹಾಯಕ್ಕೆ ಬರುವುದು ಅಂತರಜಾಲ ಮೂಲಕ ಸಹಯೋಗಿ ಬಳಕೆ ಮಾಡಬಹುದಾದ ಬಿಳಿಹಲಗೆ. ಅಂತಹ ಒಂದು ಉಚಿತ ಸೌಲಭ್ಯ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.dabbleboard.com. ಇದರಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ.

Wednesday, July 18, 2012

ಕಾನೂನು ಖಟ್ಲೆ ಹುಡುಕಿ

ನಮ್ಮ ದೇಶದಲ್ಲಿರುವಷ್ಟು ಕಾನೂನುಗಳು ಮತ್ತು ಅವುಗಳಿಗೆ ತಂದಿರುವ ತಿದ್ದುಪಡಿಗಳು ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಲ್ಲವೇನೋ? ಪ್ರತಿಯೊಂದು ವಿಷಯಕ್ಕೂ ಒಂದೊಂದು ಕಾನೂನು ಇದೆ. ಕೆಲವು ಕಾನೂನುಗಳಂತೂ ಬ್ರಿಟಿಶರ ಕಾಲದವುಗಳು. ಹಲವು ಸಲ ಈ ಕಾನೂನುಗಳನ್ನು ಬೇರೆ ಬೇರೆ ನ್ಯಾಯಾಲಯಗಳು ಹಲವು ರೀತಿಯಲ್ಲಿ ಅರ್ಥೈಸಿಕೊಂಡಿದ್ದು ಕೊನೆಗೆ ಸರ್ವೋಚ್ಚ ನ್ಯಾಯಾಲಯ ಅದಕ್ಕೆ ಅಂತಿಮ ತೀರ್ಪು ನೀಡಿದ ಉದಾಹರಣೆಗಳು ಸಾಕಷ್ಟಿವೆ. ಅಂದರೆ ಕಾನೂನು ಪುಸ್ತಕ ಓದಿದರೆ ಸಾಲದು. ಅದನ್ನು ಅನುಸರಿಸಿ ನಡೆದಿರುವ ಹಲವು ದಾವೆಗಳು ಮತ್ತು ಅವುಗಳಿಗೆ ನೀಡಿರುವ ತೀರ್ಪುಗಳು ಗೊತ್ತಿರಬೇಕು. ಸಾಮಾನ್ಯವಾಗಿ ಈ ಎಲ್ಲ ವಿಷಯಗಳನ್ನು ದೊಡ್ಡ ದೊಡ್ಡ ಪುಸ್ತಕಗಳ ರೂಪದಲ್ಲಿ ಪ್ರಕಟಿಸುತ್ತಾರೆ. ಅವುಗಳು ಬಹುಪಾಲು ನ್ಯಾಯವಾದಿಗಳ ಕಚೇರಿಗಳಲ್ಲಿರುತ್ತವೆ. ಯಾವ ಕಪಾಟಿನ ಯಾವ ಪುಸ್ತಕದ ಯಾವ ಪುಟದಲ್ಲಿ ನಿಮಗೆ ಅಗತ್ಯವಾದ ಮಾಹಿತಿ ಇದೆ ಎಂದು ತಿಳಿಯುವುದು ಹೇಗೆ? ಈ ಎಲ್ಲ ವಿಷಯಗಳು ಒಂದು ಮೌಸ್ ಕ್ಲಿಕ್‌ನ ಮೂಲಕ ಸಿಗುವಂತಿದ್ದರೆ ಒಳ್ಳೆಯದಲ್ಲವೇ? ಹೌದು. ಈಗ ಅದಕ್ಕಾಗಿಯೇ ಒಂದು ಕಾನೂನು ಶೋಧಕ ಜಾಲತಾಣ ಸಿದ್ಧವಾಗಿದೆ. ಅದರ ವಿಳಾಸ :- www.legalcrystal.com.

ಕನ್ನಡ ಮಾಧ್ಯಮದಲ್ಲಿ ಡಿಜಿಟಲ್ ಸಾಕ್ಷರತೆ

ಸಾಮಾನ್ಯ ಜನರಿಗೆ ಗಣಕದ ಮೂಲ ಕಲ್ಪನೆಗಳನ್ನು ಮತ್ತು ಕೌಶಲ್ಯಗಳನ್ನು ಸುಲಭವಾಗಿ ಕಲಿಸಲು ಮೈಕ್ರೋಸಾಫ್ಟ್ ಸಂಸ್ಥೆ ಡಿಜಿಟಲ್ ಸಾಕ್ಷರತೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪಠ್ಯಕ್ರಮ ಕನ್ನಡ ಮಾಧ್ಯಮದಲ್ಲಿದ್ದು ಅಂತರಜಾಲದಲ್ಲಿ ಉಚಿತವಾಗಿ ಲಭ್ಯವಿದೆ.

ಡಿಜಿಟಲ್ ಸಾಕ್ಷರತೆಯ ಪಠ್ಯಕ್ರಮ ಐದು ಪಾಠಗಳನ್ನು ಒಳಗೊಂಡಿದೆ:
ಕಂಪ್ಯೂಟರ್ ಬೇಸಿಕ್ಸ್
ಇಂಟರ್ನೆಟ್ ಹಾಗೂ ವರ್ಲ್ಡ್ ವೈಡ್ ವೆಬ್
ಉತ್ಪಾದಕತೆಯ ಪ್ರೋಗ್ರಾಂಗಳು
ಕಂಪ್ಯೂಟರ್ ಭದ್ರತೆ ಹಾಗೂ ಗೌಪ್ಯತೆ
ಡಿಜಿಟಲ್ ಲೈಫ್ ಸ್ಟೈಲ್ಸ್

ಪ್ರತಿ ಪಾಠದ ಅಂತ್ಯದಲ್ಲೂ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಬಹುದು. ಪಠ್ಯಕ್ರಮದ ಕೊನೆಯಲ್ಲಿ ಒಂದು ಸರ್ಟಿಫಿಕೇಟ್ ಪರೀಕ್ಷೆಯನ್ನು ಕೂಡ ತೆಗೆದುಕೊಳ್ಳಬಹುದು.

ಡಿಜಿಟಲ್ ಸಾಕ್ಷರತೆಯ ತಾಣಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ. http://goo.gl/15pui   
ಆನಂತರ ಅಲ್ಲಿ ನೀಡಲಾಗಿರುವ ಸೂಚನೆಗಳನ್ನು ಪಾಲಿಸಿ.

Sunday, July 15, 2012

14 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ವಿಶ್ ಟೆಲ್ ಟ್ಯಾಬ್ಲೆಟ್

ಆಂಡ್ರಾಯ್ಡ್ ತಂತ್ರಾಂಶ ಉಚಿತ ತಂತ್ರಾಂಶವಾಗಿರುವುದರಿಂದ ಸುಮಾರು ಕಂಪನಿಗಳು ಕಡಿಮೆ ಬಜೆಟ್ ನ ಟ್ಯಾಬ್ಲೆಟ್ ಅನ್ನು ಉತ್ಪಾದಿಸಿ ಬಿಟ್ಟರೆ ಲಾಭ ಮಾಡಿಕೊಳ್ಳಬಹುದು ಎಂಬ ಆಸೆಯಿಂದ ಹಲವಾರು ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬಂದವು. ಆದರೆ ಅವುಗಳು ಪ್ರಾಂತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ಟ್ಯಾಬ್ಲೆಟ್ ಗಳನ್ನು ತಂದಿದ್ದರೆ ಹೆಚ್ಚು ಉಪಯುಕ್ತವಾಗುತ್ತಿತ್ತು.
ಈಗ ಅಂಥಹ ಕೆಲಸ ಮಾಡಿದೆ ವಿಶ್ ಟೆಲ್ ಕಂಪನಿ, ಇರಾ ಥಿಂಗ್ 2 ಎಂಬ ಟ್ಯಾಬ್ಲೆಟ್ ಅನ್ನು ಹೊರತರುವುದರೊಂದಿಗೆ. ಕನ್ನಡ ಸೇರಿದಂತೆ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ 14 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ಇದು ಆಂಡ್ರಾಯ್ಡ್ 4.0  ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ಹೊಂದಿದ್ದು 6,500 ರೂಪಾಯಿಗೆ ಬರಲಿದೆ.
ಇದಷ್ಟೇ ಅಲ್ಲದೆ 120 ಲೋಕಲ್ ಚಾನಲ್ ಗಳನ್ನು ನೋಡುವ ಟಿವಿ ಆಪ್ ಹಾಗು, ಇ-ನ್ಯೂಸ್ ಆಪ್ ನಿಂದ ನೀವು ಪ್ರತಿನಿತ್ಯ ನಿಮ್ಮ ಭಾಷೆಯಲ್ಲಿ ಸುದ್ದಿ ಓದಬಹುದಾದ ಆಪ್ ಕೂಡ ಇದೆ.
ಇದರ ವಿಶೇಷತೆಗಳು ಈ ರೀತಿ ಇವೆ:
  • 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್
  • 1.5 GHz ಪ್ರೋಸೆಸರ್
  • 1.3MP ಕ್ಯಾಮರಾ
  • 512MB ರಾಮ್
  • 4GB ಆಂತರಿಕ ಮೆಮೊರಿ, 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
  • USB 2.0, 3.5MM ಜ್ಯಾಕ್, ಮೈಕ್ರೋ SD ಕಾರ್ಡ್ ಸ್ಲಾಟ್, ಮಿನಿ HDMI, ಮತ್ತು ಮೈಕ್ ಪೋರ್ಟ್
  • ಗೂಗಲ್ ಪ್ಲೇ ಸ್ಟೋರ್
  • 3G ಮತ್ತು ವೈಫೈ ಸಂಪರ್ಕ
  • 4 ಗಂಟೆ ಸಾಮರ್ಥ್ಯದ 3000 mAh ಬ್ಯಾಟರಿ
 ನೀಲಿ, ಕಪ್ಪು, ಬಿಳಿ, ಕೆಂಪು,ಹಳದಿ ಹಾಗು ಪಿಂಕ್ ಬಣ್ಣಗಳಲ್ಲಿ ಈ ಟ್ಯಾಬ್ಲೆಟ್ ಲಭ್ಯವಿದೆ. http://wishteltablet.com

Thursday, July 12, 2012

ಮೊಬೈಲ್ ಮಾಹಿತಿ ಅಳಿಸಿಹಾಕಲು ಬಂದಿದೆ 'ಟೈಗರ್ ಟೆಕ್ಸ್ಟ್'

ಸ್ನೇಹಿತರಿಗೇ ಆಗಲಿ, ಪರಮ ಶತ್ರುಗಳಿಗೇ ಆಗಲಿ ಅವರ ಮೊಬೈಲ್‌ಗೆ ಮೆಸೇಜ್‌, ಪೋಟೊ, ವೀಡಿಯೊ ಕಳುಹಿಸಿ ನಂತರ ಅಯ್ಯೋ ಅದನ್ನು ಅವರಿಗೆ ಕಳುಹಿಸಬಾರದಿತ್ತು ಎಂದು ಪೇಚಾಡಿಕೊಳ್ಳುತ್ತೀದ್ದೀರಾ!? ಹಾಗಾದರೆ ಅದರ ಊಸಾಬರಿ ಇನ್ನು ನಿಮಗೆ ಬೇಡ ಬಿಡಿ. ಏಕೆಂದರೆ ಟೈಗರ್ ಟೆಕ್ಸ್ಟ್ ಎಂಬ ಹೊಸ ಸಾಫ್ಟ್ ವೇರ್ ಅದಲ್ಲೆವನ್ನೂ ಕ್ಷಣಾರ್ಧದಲ್ಲಿ ಅಳಿಸಿಹಾಕಲು ಸಜ್ಜಾಗಿದೆ.
ಈ ಹೊಸ ತಂತ್ರಾಂಶವನ್ನು ನಿಮ್ಮ ಮೊಬೈಲ್‌ಗೆ ಹಾಕಿಸಿಕೊಂಡರೆ ಮೆಸೇಜ್‌ ಪಡೆಯುವವರ ಮೊಬೈಲ್‌ನಿಂದ ನೀವು ಕಳುಹಿಸಿದ ಎಸ್‌ಎಂಎಸ್‌ನ್ನು ಡಿಲೀಟ್‌ ಮಾಡಬಹುದು. ಅಮೆರಿಕದಲ್ಲಿ ಸಿದ್ಧವಾಗಿರುವ ಈ ಟೈಗರ್ ಟೆಕ್ಸ್ಟ್ ಎಂಬ ಸಾಫ್ಟ್ ವೇರ್ ಸದ್ಯಕ್ಕೆ ಭಾರತಕ್ಕೆ ಇನ್ನೂ ಬಂದಿಲ್ಲ. ಈ ಮಧ್ಯೆ, ಭಾರತ ಸರಕಾರ ಇದರಿಂದ ಹೊಸ ಭದ್ರತಾ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದು ಬಳಕೆದಾರನಿಗೆ ತಾನು ಕಳುಹಿಸಿದ ಮಾಹಿತಿ ಮೇಲೆ ಸಂಪೂರ್ಣ ಹಕ್ಕನ್ನು ಒದಗಿಸಿಕೊಡುತ್ತದೆ. ಎಸ್‌ಎಂಎಸ್‌, ವೀಡಿಯೊ, ಫೋಟೋಗಳನ್ನು ಕಳುಹಿಸಿದರೆ ಆ ಬಳಿಕ ಸೇವಾದಾರರಲ್ಲಿ ಕಾದಿರಿಸುವ ಮಾಹಿತಿಯನ್ನು ತನ್ನಿಂತಾನೇ ಅಳಿಸಿಹಾಕುವ ವ್ಯವಸ್ಥೆಯನ್ನು ಟೈಗರ್ ಟೆಕ್ಸ್ಟ್ ಒದಗಿಸಿಕೊಡಲಿದೆ. ಇದರಿಂದ ನಿಮ್ಮ ಖಾಸಗಿತನವನ್ನು ಯಾವುದೇ ಅಂಜಿಕೆ ಇಲ್ಲದೆ ಅನುಭವಿಸಬಹುದು ಎಂದು ಟೈಗರ್ ಟೆಕ್ಸ್ಟ್ ತಂತ್ರಾಂಶ ಪರಿಚಯಿಸಿದ ಅಮೆರಿಕದ ಕಂಪನಿ ಹೇಳಿದೆ. ಈ ತಂತ್ರಾಶ ಐಫೋನ್‌, ಬ್ಲ್ಯಾಕ್‌ಬೆರಿ, ಆಂಡ್ರಾಯಿಡ್‌ ಹೊಂದಿರುವ ಫೋನ್‌ಗಳಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿ ಹಾಗೂ ತಂತ್ರಾಂಶಕ್ಕಾಗಿ ಜಾಲತಾಣ :

ಅಗ್ಗದ ಸಾಧನ ಯಾವ ತಾಣದಲ್ಲಿ ಲಭ್ಯ?

http://www.shopobot.com/ ಒಂದು ಹೊಸ ರೀತಿಯ ತಾಣ.ಈ ತಾಣ ಅಮೇಜಾನ್,ವಾಲ್‌ಮಾರ್ಟ್,ನ್ಯೂಎಗ್ ಮುಂತಾದ ಪ್ರಸಿದ್ಧ ತಾಣಗಳಲ್ಲಿ ವಿವಿಧ ಸಾಧನಗಳ ದರಗಳೆಷ್ಟಿವೆ ಎನ್ನುವುದನ್ನು ಪರಿಶೀಲಿಸುತ್ತಿರುತ್ತದೆ.ಇದು ಸ್ವಯಂಚಾಲಿತ ವ್ಯವಸ್ಥೆಯಾಗಿದೆ.ಸಾಧನಗಳನ್ನು ವಿವಿಧ ಹೊತ್ತಿನಲ್ಲಿ ವಿವಿಧ ತಾಣಗಳು ಬೇರೆ ಬೇರೆ ಬೆಲೆಯಲ್ಲಿ ಮಾರುತ್ತಿರುತ್ತವೆ. ಶಾಪೋಬೋಟ್ ತಾಣಕ್ಕೆ ಭೇಟಿ ನೀಡಿದವರಿಗೆ ಅಗ್ಗದಲ್ಲಿ ಸಾಧನ ಮಾರಾಟವಾಡುತ್ತಿರುವ ಸ್ಟೋರ್ ಯಾವುದು ಮತ್ತು ಎಷ್ಟು ಹೊತ್ತಿಗೆ ಬೆಲೆ ಕಡಿಮೆ ಎನ್ನುವುದು ತಿಳಿಯುತ್ತದೆ.ಇದರ ಲಾಭವನ್ನು ಗ್ರಾಹಕರು ಪಡೆಯಬಹುದು.

ಗುಟ್ಟು ರಟ್ಟಾಗಿಸಿ!

ವಿಕಿಲೀಕ್ಸ್ ತಾಣದ ಮೂಲಕ ಹಲವು ದೇಶಗಳ ಗುಟ್ಟುಗಳು ಬಹಿರಂಗವಾಗಿ,ಗುಲ್ಲಾದ್ದು ಈಗ ಹಳೆಯ ಸುದ್ದಿ. ಕಚೇರಿ, ಆಡಳಿತಗಳ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಇರುವವರು ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಈಗ ಅನೇಕ ತಾಣಗಳು ಲಭ್ಯವಾಗಿವೆ.ಕೆಲವು ತಾಣಗಳಂತೂ ಮಾಹಿತಿ ಹಂಚಿಕೊಳ್ಳುವವರ ಬಗೆಗಿನ ವಿವರಗಳೂ ಗೌಪ್ಯವಾಗಿರುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತವೆ. ಬಾಲ್ಕನ್‌ಲೇಕ್ಸ್, ಇಂಡೋಲೀಕ್ಸ್ ಅಂತಹ ತಾಣಗಳು ನಿಗದಿತ ಪ್ರದೇಶಗಳ ಗುಟ್ಟುಗಳನ್ನು ಬಹಿರಂಗವಾಗಿಸಲು ಲಭ್ಯವಾಗಿರುವ ತಾಣಗಳಾಗಿವೆ. ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯೂ ಗುಟ್ಟು-ರಟ್ಟಾಗಿಸಲು ಸೇಫ್‌ಹೌಸ್ ಅನ್ನುವ ತಾಣವನ್ನು ಒದಗಿಸಿದೆ.ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮಟ್ಟಿಗೆ ಪತ್ರಿಕೆ ಸೀಮಿತ ಆಶ್ವಾಸನೆಯನ್ನಷ್ಟೇ ನೀಡುತ್ತಿದೆ.ಕೋರ್ಟು ಖಟ್ಲೆಯ ಸಂದರ್ಭದಲ್ಲಿ ಮಾಹಿತಿದಾರನ ಮೂಲವನ್ನು ಬಹಿರಂಗ ಪಡಿಸುವ ಅನಿವಾರ್ಯತೆಯನ್ನು ತಾಣದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.ಓಪನ್‌ಲೀಕ್ಸ್ ತಾಣ ಆ ಮಟ್ಟಿಗೆ ಹೆಚ್ಚು ನಂಬಿಕೆಗೆ ಅರ್ಹವಾಗುವ ಸೂಚನೆಯಿದೆ. ಇದಿನ್ನೂ ಸಂಪೂರ್ಣ ಸಿದ್ಧವಾಗಿಲ್ಲ. ಮಾಹಿತಿದಾರನ ತಾಣ ಯಾವುದೆನ್ನುವುದನ್ನು ಗುಪ್ತವಾಗಿಸಲು ತಂತ್ರಾಂಶಗಳೂ ಇವೆ. ಟೋರ್ ಎನ್ನುವ ತಂತ್ರಾಂಶ,ಅಂತರ್ಜಾಲದಲ್ಲಿ ಹರಡಿರುವ ಸ್ವಯಂಸೇವಕರ ಗಣಕಗಳ ಸಹಾಯ ಪಡೆದು, ಮೂಲವನ್ನು ಮರೆಮಾಚುವ ತಂತ್ರವನ್ನು ಬಳಸುತ್ತದೆ.

ಡಿಜಿಟಲ್ ಫೋಟೋಗ್ರಫಿ

ಡಿಜಿಟಲ್ ಕ್ಯಾಮರಾಗಳು ಈಗೀಗ ಸರ್ವೇಸಾಮಾನ್ಯವಾಗಿವೆ. ಹಲವು ಗುಣವೈಶಿಷ್ಟ್ಯಗಳ ಕ್ಯಾಮರಾಗಳು ಎಲ್ಲರ ಕೈಗೆಟುಕುತ್ತಿವೆ. ಆದರೆ ಈ ಕ್ಯಾಮರಾಗಳನ್ನು ಬಳಸುವುದು ಹೇಗೆ? ಸುಮ್ಮನೆ ನೋಡಿ ಕ್ಲಿಕ್ ಮಾಡುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಕ್ಯಾಮರಾದಲ್ಲಿ ನೀಡಿರುವ ಎಲ್ಲ ಆಯ್ಕೆಗಳನ್ನು ಬಳಸುವುದು ಹೇಗೆ? ಈ ಅಪೆರ್ಚರ್, ಐಎಸ್‌ಓ, ಶಟ್ಟರ್ ಸ್ಪೀಡ್, ಇತ್ಯಾದಿ ಆಯ್ಕೆಗಳನ್ನು ಯಾವ ಸಂದರ್ಭದಲ್ಲಿ ಯಾವ ರೀತಿ ಬಳಸಬೇಕು? ಈ ಪ್ರಶ್ನೆಗಳು ಹೊಸತಾಗಿ ಕ್ಯಾಮರಾ ಕೊಂಡುಕೊಂಡ ಎಲ್ಲರ ಮನದಲ್ಲೂ ಮೂಡುವುದರಲ್ಲಿ ಆಶ್ಚರ್ಯವಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರರೂಪವಾಗಿ www.photoxels.com ಜಾಲತಾಣವಿದೆ. ಡಿಜಿಟಲ್ ಫೋಟೋಗ್ರಫಿ ಬಗ್ಗೆ ಸಂಪೂರ್ಣ ಅಜ್ಞಾನಿಯಿಂದ ಹಿಡಿದು ಪರಿಣತರ ತನಕ ಎಲ್ಲ ವರ್ಗದವರಿಗೂ ಉಪಯೋಗಿಯಾಗುವ ಲೇಖನಗಳು ಇಲ್ಲಿವೆ. 

ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಕಲಿಯಿರಿ

ಕನ್ನಡ ಕಲಿಯಬೇಕೆಂಬ ಉತ್ಸಾಹವುಳ್ಳ ಕನ್ನಡೇತರರಿಗೆ ಅಥವಾ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಆಸಕ್ತಿಯುಳ್ಳ ಹೊರನಾಡ ಕನ್ನಡಿಗರಿಗೆ ಇಲ್ಲೊಂದು ಅತ್ಯುತ್ತಮ ಅವಕಾಶ ಕೂಡಿಬಂದಿದೆ. ಮನೆ ಅಥವಾ ಕಚೇರಿಯಲ್ಲಿದ್ದಲ್ಲಿಂದಲೇ ಆನ್ ಲೈನ್ ಮೂಲಕ ಸರಳವಾಗಿ ಕನ್ನಡ ಕಲಿಯುವ ತರಗತಿಗಳು  www.go4guru.com ಅಂತರ್ಜಾಲ ತಾಣದಲ್ಲಿ ಆರಂಭವಾಗಿವೆ.

ಇಲ್ಲಿ ಕನ್ನಡ ಕಲಿಯುವುದು ಸುಲಭ ಮಾತ್ರವಲ್ಲ ಉಚಿತ ಕೂಡ. ವಿಶ್ವದ ಯಾವುದೇ ಮೂಲೆಯಲ್ಲಿರುವ ಕನ್ನಡ ದಾಹಿಗಳು ಕನ್ನಡ ಭಾಷೆಯನ್ನು ಇಲ್ಲಿ ಕಲಿಯಬಹುದಾಗಿದೆ. go4guru ವೆಬ್ ಸೈಟಿಗೆ ಹೋಗಿ ನೊಂದಾಯಿಸಿಕೊಂಡು ಬೇಸಿಗೆ ತರಗತಿಗಳಲ್ಲಿ ಶ್ರದ್ಧಾವಂತ ವಿದ್ಯಾರ್ಥಿಯಾಗಿ ಭಾಗವಹಿಸಬಹುದು.

ಕನ್ನಡ ತರಗತಿಗಳಿಗೆ ಹೋಗಿ ಭಾಷೆ ಕಲಿಯುವುದು ಎಷ್ಟು ಕಷ್ಟಕರವೆಂದು ಎಲ್ಲರಿಗೂ ತಿಳಿದ ವಿಷಯ. ಇಲ್ಲಿ ಆ ಜಂಜಾಟವಿಲ್ಲ. ಮನೆಯಲ್ಲಿದ್ದಲ್ಲಿಂದಲೇ ಆಡಿಯೋ, ವಿಡಿಯೋ, ಚಾಟಿಂಗ್ ಮುಖಾಂತರ ಕನ್ನಡ ಕಲಿಯಬಹುದು. ಕನ್ನಡ ಕಲಿಸುವ ಶಿಕ್ಷಕರೊಡನೆ ಸಂವಾದ ಮಾಡುತ್ತ ಕನ್ನಡ ಕಲಿಯಬಹುದು.

ಕನ್ನಡ ತರಗತಿಗಳಲ್ಲದೆ ವಿದ್ಯಾರ್ಥಿಗಳಿಗಾಗಿ ಕರ್ನಾಟಕ, ಹಿಂದೂಸ್ತಾನಿ ಸಂಗೀತ, ಗಣಿತ, ಅಬ್ಯಾಕಸ್, ಚೆಸ್, ಫ್ರೆಂಚ್ ಮತ್ತಿತರ ಭಾಷೆಗಳನ್ನು ಕೂಡ ಕಲಿಯಬಹುದು. ಈ ತರಗತಿಗಳಲ್ಲಿ ಭಾಗವಹಿಸುವ ಮುಖಾಂತರ ಸಮಯವನ್ನೂ ಉಳಿಸಬಹುದು ಎಂಬುದು ಈ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಿರುವ ಅಮೆರಿಕದಲ್ಲಿರುವ ಕಯಂಬು ರಾಮಲಿಂಗಂ ಅವರ ಅಭಿಪ್ರಾಯ.

ಹೆಚ್ಚಿನ ವಿವರಗಳಿಗಾಗಿ www.go4guru.com ತಾಣಕ್ಕೆ ಭೇಟಿ ನೀಡಿರಿ.

Friday, July 6, 2012

ಶೂನ್ಯ ಹೆಲಿಕಾಫ್ಟರ್ !

ಟ್ರಾಫಿಕ್ ಮುಕ್ತಿ ಸಾಧನ ಶೂನ್ಯ ಹೆಲಿಕಾಫ್ಟರ್!
ಜಗತ್ತಿಗೆ ಗಣಿತದಲ್ಲಿ ಭಾರತದ ಕೊಡುಗೆ ಏನು? ಪ್ರಶ್ನೆಯಷ್ಟೆ ಸಹಜವಾಗಿ ಸೊನ್ನೆ ಎಂಬ ಉತ್ತರ ಬರುತ್ತದೆ. ಇವತ್ತು ಶೂನ್ಯಕ್ಕೆ ತನ್ನದೇ ಆದ ಅರ್ಥ ಹಾಗೂ ಅಷ್ಟೇ ವಿಶಾಲ ವ್ಯಾಪ್ತಿ ಇದೆ. 
ಈ ಶೂನ್ಯ ಸಿದ್ಧಾಂತ ಹೊಸ ಹೊಸ ಆವಿಷ್ಕಾರಗಳಿಗೆ, ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ನಿಂದ ದೊಡ್ಡ ದೊಡ್ಡ ನಗರಗಳ ಸಂಚಾರ ತೀರಾ ದುಸ್ತರ. ಅಷ್ಟೇ ಬೇಸರ ತರಿಸುವ ಸಂಗತಿ. ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇಂದು ಸರ್ವೇಸಾಮಾನ್ಯ. ಶೂನ್ಯ ಟ್ರಾಫಿಕ್ (ಸಂಚಾರ ದಟ್ಟಣೆ ಇಲ್ಲದೆ ಖಾಲಿ ಖಾಲಿಯಾಗಿರುವ ರಸ್ತೆಗಳು) ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ವಿಮಾನದಲ್ಲಿ ಅಮೇರಿಕ ತಲುಪುವ ವೇಳೆಯಲ್ಲಿ ನಗರ ಪ್ರದೇಶಗಳಲ್ಲಿ 10 ಕಿಲೋ ಮೀಟರ್ ಸಂಚರಿಸಬಹುದು.
ನಗರಗಳಲ್ಲಿ ಟ್ರಾಫಿಕ್ ಕಿರಿಕಿರಿಯೇ ಹೊಸ ಅನ್ವೇಷಣೆಗೆ ಪ್ರೇರಣೆ ನೀಡಿದೆ. ಎಂದರೆ ನೀವು ನಂಬಲೇಬೇಕು. ಸಂಚಾರಿ ಸಮಸ್ಯೆಯಿಂದ ಪಾರಾಗಿ ಆಕಾಶ ಮಾರ್ಗದಲ್ಲಿ ಸುಲಭವಾಗಿ ಹಾರಿ ಹೋಗಲೆಂದೇ 'ಶೂನ್ಯ ಹೆಲಿಕಾಫ್ಟರ್' ಬರಲಿದೆ. ನಗರ ಪ್ರದೇಶಗಳಲ್ಲಿ ಸಂಚರಿಸಲು ಸುಲಭವಾಗುವ ಇದೊಂದು ಸಂಪೂರ್ಣ ಖಾಸಗಿ ಹೆಲಿಕಾಫ್ಟರ್. 
ಏನಿದು ಶೂನ್ಯ ಹೆಲಿಕಾಫ್ಟರ್ ?
ಸೊನ್ನೆಯಾಕಾರದ ಕ್ಯಾಬಿನ್ ಇರೂ ಚಿಕ್ಕ ಹೆಲಿಕಾಫ್ಟರ್. ಪಾಶ್ಚಿಮಾತ್ಯ ಸಂಗೀತ ಸಾಧನ ಡ್ರಂ ಆಕಾರವಿರೋ ಈ ಹೆಲಿಕಾಪ್ಟರ್ ನಲ್ಲಿ ಇರೋದು ಒಂದೇ ಒಂದು ಸೀಟು ಮಾತ್ರ. ಜತೆಗೆ ಸಣ್ಣ ಸೊನ್ನೆಯಾಕಾರ ಬಾಲ ಹೆಲಿಕಾಫ್ಟರ್ ಗೆ ಹೊಸ ನೋಟ ನೀಡಿದೆ. ಬಾಗಿಲಂತೂ ಇಲ್ಲವೇ ಇಲ್ಲ. ಸ್ಪ್ಯಾನಿಷ್ ನ ಹೆಕ್ಟರ್ ದೆಲಾಂ ಈ ಶೂನ್ಯ ಕಾಫ್ಟರ್ ಮಾದರಿ ರೂಪಿಸಿದ್ದಾರೆ.
ಇಂಧನ ಕ್ಷಮತೆ ಅಂದರೆ ಅತಿ ಕಡಿಮೆ ಇಂಧನ ಬಳಕೆ, ಸುಲಭ ಚಾಲನಾ ತಂತ್ರಜ್ಞಾನ ಹಾಗೂ ಲ್ಯಾಂಡಿಂಗ್ ಆಗಲು ಸಣ್ಣ ಜಾಗ ಸಾಕು ಎಂಬುದು ಹೆಕ್ಟರ್ ಸಮಜಾಯಿಷಿ. ಈ ಶೂನ್ಯ ಕಾಫ್ಟರ್ ನಿಂದ ಸಂಚಾರಿ ದಟ್ಟಣೆ ಕಡಿಮೆಯಾಗುತ್ತೋ ಇಲ್ಲವೂ ಗೊತ್ತಿಲ್ಲ. ಹೈಟೆಕ್ ಕಾರುಗಳಲ್ಲಿ  ಸಂಚರಿಸೋರು ಸುಲಭವಾಗಿ ಹೆಲಿಕಾಫ್ಟರ್ ಮೂಲಕ ಗಗನ ಸಂಚಾರಿಯಾಗಿ ಕಛೇರಿ  ಸೇರಿಕೊಳ್ಳಬಹುದು.
ಶೂನ್ಯ ಹೆಲಿಕಾಫ್ಟರ್ ನ ಮತ್ತಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ನೋಡಲು ಜಾಲತಾಣ:
http://elitedaily.com/elite/2012/zerohelicopter/

Wednesday, July 4, 2012

ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ


ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಆಗಬೇಕು

ಗ್ರಾಹಕರ ಹಕ್ಕುಗಳ ಬಗ್ಗೆ ನಮ್ಮ ಜನರಲ್ಲಿ ಜಾಗೃತಿ ಮತ್ತಷ್ಟು ವ್ಯಾಪಕ ಮಟ್ಟದಲ್ಲಿ ಹುಟ್ ಹಾಕ್ಬೇಕು.ನಗರಗಳಲ್ಲಿ ಇಂಥಾ ಜಾಗೃತಿ ಇದ್ರೂ ಕೂಡಾ ಜನ ತಲೆ ಕೆಡುಸ್ಕೋತಾ ಇಲ್ಲ, ಹಳ್ಳಿಗಳ ಕಡೆ ಇಂಥಾ ಜಾಗೃತಿಯ ಕೊರತೆ ತೀವ್ರವಾಗಿ ಇದೆ. ಗ್ರಾಹಕ ಹಕ್ಕುಗಳ ಬಗ್ಗೆ ನಗರ, ಹಳ್ಳಿ ಎಲ್ಲ ಕಡೆ ಜಾಗೃತಿ ಮೂಡಿಸಬೇಕು ಅನ್ನೋ ಕಾಳಜಿಯೇನೋ ಸರಿಯಿದೆ. ಆದರೆ ಜಾಹಿರಾತುಗಳು, ಅರ್ಜಿಗಳು, ಸೂಚನೆಗಳು, ಬಿಲ್ಲುಗಳು, ರಸೀತಿಗಳೂ ಸೇರಿದಂತೆ ಗ್ರಾಹಕನ ಜೊತೆ ನಡೀತಿರೋ ವ್ಯವಹಾರವೆಲ್ಲಾ ಕನ್ನಡದಲ್ಲಿ ನಡೆಯೋ ವ್ಯವಸ್ಥೆ ಮಾಡದೆ, ಸರ್ಕಾರ ಜನ ಜಾಗೃತಿ ಆಗ್ತಿಲ್ಲಾ ಅಂತ ಎಷ್ಟು ಪೇಚಾಡುದ್ರೂ ಪರಿಣಾಮ ಅಷ್ಟಕ್ಕಷ್ಟೇ.

ಜಾಗೃತಿ ಪರಿಣಾಮಕಾರಿ ಮಾಡೋದು ಹ್ಯಾಗೆ?

ಗ್ರಾಹಕರ ಹಕ್ಕುಗಳ ಬಗ್ಗೆ ಜನರಿಗೆ ನಾವು ಎಷ್ಟೇ ಹೇಳಿ ಕೊಟ್ರೂ, ಗ್ರಾಹಕ ಸೇವೆ ಕನ್ನಡದಲ್ಲಿ ಇಲ್ಲದೇ ಇದ್ರೆ ಅದು ಪರಿಣಾಮಕಾರಿ ಆಗಲ್ಲ. ಉದಾಹರಣೆಗೆ ಯಾವುದೋ ಒಂದು ವಸ್ತು ಕೊಂಡುಕೊಳ್ಳೋ ಗ್ರಾಹಕನಿಗೆ, ಅದರ ಮೇಲೆ ಬರೆದಿರೋ ಸೂಚನೆಗಳು ಅವನದಲ್ಲದ ಭಾಷೇಲಿ ಇರೋ ಕಾರಣದಿಂದ ಸರಿಯಾಗಿ ಅವುಗಳ್ನ ಪಾಲಿಸಕ್ಕೆ ಆಗಲಿಲ್ಲ ಅಂದ್ರೆ ಅಥವಾ ಆ ಕಾರಣಕ್ಕೇ ನಿಬಂಧನೆಗಳು ಅರ್ಥ ಆಗ್ದೆ ಇದ್ರೆ ಅದಕ್ಕೆ ಯಾರು ಹೊಣೆ? ಯಾವ್ದೋ ಅಂಗಡಿಗೆ ಹೋಗಿ ಅಲ್ಲಿ ಬರೆದಿರೋ ನಾಮಫಲಕ ಕನ್ನಡದಲ್ಲಿ ಇಲ್ಲದ ಕಾರಣಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದರೆ ಅಥ್ವಾ ಅವರ ಸೇವೆಯ ವ್ಯಾಪ್ತಿ ಅರ್ಥವಾಗದೆ ಎಡವಟ್ಟಾದ್ರೆ ಯಾರು ಹೊಣೆ?

ಭಾಷೆ ಮತ್ತು ಗ್ರಾಹಕನ ಹಕ್ಕು

ತೂಕ, ಪ್ರಮಾಣ, ಅಳತೆ ಇವೆಲ್ಲವೂ ಸರಿಯಾಗಿ ಇರಬೇಕು ಅನ್ನೋದ್ರ ಜೊತೆಜೊತೆಗೇ ಗ್ರಾಹಕನಿಗೆ ಏನೇನೆಲ್ಲಾ ಹಕ್ಕುಗಳಿವೆ, ಅವನ ಸಹಾಯಕ್ಕೆ ಏನೇನೆಲ್ಲಾ ಸಂಸ್ಥೆಗಳು, ವ್ಯವಸ್ಥೆಗಳು ಇವೆ ಅಂತೆಲ್ಲಾ ಜಾಗೃತಿ ಮೂಡಿಸಬೇಕು ಅನ್ನೋದೇನೋ ಸರಿ. ಎಲ್ಲಾ ವಸ್ತುಗಳ ಮೇಲಿನ ಸೂಚನೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು, ಅಲ್ಲಿನ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಇರಬೇಕಾದದ್ದು ಕಡ್ಡಾಯ ಆಗಬೇಕು. ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದನ್ನ ನಾವು ಮರೀಬಾರ್ದು.

ದೂರದರ್ಶನಗಳಲ್ಲಿ ಜಾಗೃತಿಯ ಬಗ್ಗೆ ಜಾಗೋ ಭಾರತ್ ಎಂಬ ಪ್ರಚಾರ ಮಾಡುತ್ತಿದ್ದರೂ ಸಹ. ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯವಾಗಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರಚಾರ ಅಭಿಯಾನಗಳನ್ನು ಸರ್ಕಾರ ಕೈಗೊಂಡಲ್ಲಿ ಸ್ವಲ್ಪ ಮಟ್ಟಿಗೆಯಾದರೂ ಜನರಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಬಹುದು. ಭಾಷಾ ಆಯಾಮವಿಲ್ಲದೆ ಯಾವ ತೆರನಾದ ಜಾಗೃತಿ ಮೂಡುಸ್ತೀನಿ ಅಂತಂದ್ರೂ ಅದು ಪರಿಣಾಮಕಾರಿ ಆಗಲ್ಲ. ಇದನ್ನು ಸಂಬಂಧ ಪಟ್ಟವರು ಅರ್ಥ ಮಾಡ್ಕೋಬೇಕು. ಅಲ್ವಾ?. http://fcamin.nic.in/

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯ್ದೆ ೨೦೦೫ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದ ಪ್ರಜೆಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ದಾಖಲೆಗಳು ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯು ಜಮ್ಮು ಮತ್ತು ಕಾಶ್ಮೀರವನ್ನು ಬಿಟ್ಟು ಭಾರತದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ.
  
ಮಾಹಿತಿ ಹಕ್ಕು ಎಂದರೆ ಏನು ?

"ಮಾಹಿತಿಗಾಗಿ ಹಕ್ಕು" ಎಂದರೆ ಯಾವುದೇ ಸಾರ್ವಜನಿಕ ಪ್ರಾಧಿಕಾರ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ, ಈ ಅಧಿನಿಯಮದ ಅಡಿಯಲ್ಲಿ ಪಡೆಯಬಹುದಾದ ಮಾಹಿತಿಯ ಹಕ್ಕು ಮತ್ತು ಇದರಲ್ಲಿ,-
(ಎ) ಕೆಲಸದ, ದಸ್ತಾವೇಜುಗಳ, ದಾಖಲೆಗಳ, ಪರಿವೀಕ್ಷಣೆ ಮಾಡುವ;
(ಬಿ) ದಸ್ತಾವೇಜುಗಳ ಅಥವಾ ದಾಖಲೆಗಳ ಟಿಪ್ಪಣಿಗಳನ್ನು, ಉದ್ಧೃತ ಭಾಗಗಳನ್ನು ಅಥವಾ ಪ್ರಮಾಣೀಕೃತ ಪ್ರತಿಗಳನ್ನು ತೆಗೆದುಕೊಳ್ಳುವ;
(ಸಿ) ವಿಷಯ ಸಾಮಗ್ರಿಯ ಪ್ರಮಾಣೀಕೃತ ಮಾದರಿಗಳನ್ನು ಪಡೆದುಕೊಳ್ಳುವ;
(ಡಿ) ಡಿಸ್ಕೆಟ್ಗಳು, ಪ್ಲಾಫೀಗಳು, ಟೇಪುಗಳು, ವಿಡಿಯೋ ಕ್ಯಾಸೆಟ್ಗಳ ರೂಪದಲ್ಲಿ ಅಥವಾ ಯಾವುದೇ ಇತರ ವಿದ್ಯುನ್ಮಾನ ವಿಧಾನದಲ್ಲಿ ಅಥವಾ ಅಂತಹ ಮಾಹಿತಿಯನ್ನು ಗಣಕಯಂತ್ರದಲ್ಲಿ ಅಥವಾ ಯಾವುದೇ ಇತರ ಸಾಧನದಲ್ಲಿ ಸಂಗ್ರಹಿಸಿಟ್ಟಿದ್ದರೆ ಅದರ ಮುದ್ರಿತ ಪ್ರತಿಯ ಮೂಲಕ ಮಾಹಿತಿ ಪಡೆಯುವ ಹಕ್ಕು ಒಳಗೊಂಡಿರುತ್ತದೆ.

ಮಾಹಿತಿ ಹಕ್ಕು ಅಧಿನಿಯಮದ ಉದ್ದೇಶಗಳು

ಭಾರತ ಸಂವಿಧಾನವು ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸ್ಥಾಪಿಸಿರುವುದರಿಂದ; ಮಾಹಿತಿಯನ್ನು ಪಡೆಯಲಿಚ್ಛಿಸುವ ನಾಗರಿಕರಿಗೆ ಕೆಲವು ಮಾಹಿತಿ ಒದಗಿಸುವುದಕ್ಕೆ ಉಪಬಂಧ ಕಲ್ಪಿಸುವುದು ಈಗ ವಿಹಿತವಾಗಿರುವುದರಿಂದ; ವಾಸ್ತವಿಕ ಪದ್ಧತಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸರ್ಕಾರಗಳ ದಕ್ಷ ಕಾರ್ಯಾಚರಣೆಗಳು, ಪರಿಮಿತ ಆರ್ಥಿಕ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಮತ್ತು ಸೂಕ್ಷ್ಮಮಾಹಿತಿಯ ಗೌಪ್ಯತೆಯ ಸಂರಕ್ಷಣೆ ಒಳಗೊಂಡಂತೆ ಇತರ ಸಾರ್ವಜನಿಕ ಹಿತಾಸಕ್ತಿಗಳೊಂದಿಗೆ ಸಂಘರ್ಷ ಉಂಟಾಗುವ ಸಾಧ್ಯತೆ ಇರುವುದರಿಂದ;

ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಮತ್ತು ಸರ್ಕಾರಗಳು ಹಾಗೂ ಅವುಗಳ ಅಂಗಸಂಸ್ಥೆಗಳು ಜನರಿಗೆ ಜವಾಬ್ಧಾರಿಯಾಗಿರುವಂತೆ ಮಾಡಲು ತಿಳುವಳಿಕೆಯುಳ್ಳ ನಾಗರಿಕರು ಮತ್ತು ಮಾಹಿತಿಯ ಪಾರದರ್ಶಕತೆಯು ಪ್ರಮುಖವಾಗಿರುವುದರಿಂದ;

ಪ್ರಜಾಸತ್ತಾತ್ಮಕ ಆದರ್ಶದ ಸಾರ್ವಭೌಮತೆಯನ್ನು ಸಂರಕ್ಷಿಸುವುದರ ಜೊತೆಗೆ ಸಂಘರ್ಷಕ್ಕೊಳಗಾಗುವ ಹಿತಾಸಕ್ತಿಗಳ ನಡುವೆ ಸಾಮರಸ್ಯ ಮೂಡಿಸುವುದು ಅವಶ್ಯವಾಗಿರುವುದರಿಂದ;

ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರೀ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕಿನ ಕಾರ್ಯರೂಪದ ವ್ಯವಸ್ಥೆಯನ್ನು ರೂಪಿಸುವುದಕ್ಕೆ, ಕೇಂದ್ರ ಮಾಹಿತಿ ಆಯೋಗದ ರಚನೆಗೆ ಮತ್ತು ರಾಜ್ಯ ಮಾಹಿತಿ ಆಯೋಗಗಳ ರಚನೆಗೆ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಆನುಷಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವ ಅಧಿನಿಯಮ.
ಭಾರತ ಗಣರಾಜ್ಯದ ಐವತ್ತಾರನೇ ವರ್ಷದಲ್ಲಿ ಸಂಸತ್ತಿನಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

ಮಾಹಿತಿ ಹಕ್ಕು ಅಧಿನಿಯಮ ೨೦೦೫     (ಅಧಿನಿಯಮ ಸಂಖ್ಯೆ ೨೦೦೫ ರ ೨೨)     [೧೫ನೇ ಜೂನ್, ೨೦೦೫]

ಹೆಚ್ಚಿನ ವಿವರಗಳಿಗೆ:-



Saturday, June 30, 2012

ಗೂಗಲ್ ಡ್ರೈವ್ ಬಗ್ಗೆ ತಿಳಿದಿರಬೇಕಾದ 7 ಅಂಶಗಳು

  • ಗೂಗಲ್ ಡ್ರೈವ್ ನಿಂದ ನೀವು ಡೇಟಾ ಅಪ್ಲೋಡ್ ಮಾಡಿದ ಮೇಲೆ ಅವುಗಳು ಗೂಗಲ್ ನ ಸರ್ವರ್ಗಳಲ್ಲಿ ಶೇಖರಣೆಯಾಗುವುದರಿಂದ, ನಿಮ್ಮ ಡೇಟಾವನ್ನು ಎಲ್ಲಿಂದ ಬೇಕಾದರೂ ಉಪಯೋಗಿಸಬಹುದು.
  • ಗೂಗಲ್ ಡ್ರೈವ್ ನ ಆಪ್ ನಿಂದ ಕೆಲಸ ಮಾಡುವ ಈ ಕ್ಲೌಡ್ ಶೇರಿಂಗ್, ಇದನ್ನು ಉಪಯೋಗಿಸುವಾಗ, ನಿಮ್ಮ ಕಂಪ್ಯೂಟರ್ ನಲ್ಲಿ ವಿಂಡೋಸ್ ನ ಫೊಲ್ಡರ್ ಒಂದನ್ನು ಕ್ರಿಯೇಟ್ ಮಾಡುತ್ತದೆ. ಆ ಫೊಲ್ಡರ್ ನಲ್ಲಿ ಶೇಖರಿಸಿದ ಯಾವುದೇ ಮಾಹಿತಿ ನಿಮ್ಮ ಹಾರ್ಡ್ ಡಿಸ್ಕ್ ಹಾಗು ಗೂಗಲ್ ಡ್ರೈವ್ ನಲ್ಲೂ ಸ್ಟೋರ್ ಆಗುತ್ತದೆ. ಹೀಗಾಗಿ ನೀವು ಈ ಮಾಹಿತಿಯನ್ನು ಬೇರೆ ಕಂಪ್ಯೂಟರ್ ಹಾಗು ಮೊಬೈಲಿನಿಂದಲೂ ಪಡೆಯಬಹುದು.
  •  ಸದ್ಯಕ್ಕೆ 5GB ಡೇಟಾ ಸ್ಟೋರೇಜ್ ಫ್ರೀ ಆಗಿ ಕೊಡುತ್ತಿರುವ ಗೂಗಲ್, 100 GB ಡೇಟಾ ಸ್ಟೋರೇಜ್ ಬೇಕಿದ್ದರೆ ಪ್ರತಿ ತಿಂಗಳು 5 ಡಾಲರ್ ಬಾಡಿಗೆ ಕೊಟ್ಟರೆ ಸಾಕು.
  •  ಗೂಗಲ್ ಡ್ರೈವ್ ನಿಮ್ಮ ಮ್ಯಾಕ್, ಪಿಸಿ, ಆಂಡ್ರಾಯ್ಡ್ ಟ್ಯಾಬ್ಲೆಟ್ ಹಾಗು ಮೊಬೈಲುಗಳಿಗೂ ಡೌನ್ಲೋಡ್ ಮಾಡಬಹುದು.
  •  ಹಾರ್ಡ್ ಡಿಸ್ಕ್ ನಲ್ಲಿ ಯಾವ ಯಾವ ಡೇಟಾ ಸ್ಟೋರ್ ಮಾಡಿಕೊಳ್ಳಬಹುದೋ ಆ ಎಲ್ಲ ರೀತಿಯ ಡೇಟಾವನ್ನೂ ಗೂಗಲ್ ಡ್ರೈವ್ ನಲ್ಲಿ ಶೇಖರಿಸಬಹುದು.
  • ಗೂಗಲ್ ಡಾಕ್ಸ್ ಕೂಡಾ ಗೂಗಲ್ ಡ್ರೈವ್ ನಲ್ಲಿ ಇರುವುದರಿಂದ ನೀವು ಡಾಕ್ಯುಮೆಂಟ್ಸ್, ಸ್ಪ್ರೆಡ್ ಶೀಟ್ಸ್, ಹಾಗು ಪ್ರೆಸೆನ್ಟೇಶನ್ಗಳನ್ನೂ ಮಾಡಬಹುದಾಗಿದೆ.
  •  ಗೂಗಲ್ ಡ್ರೈವ್ ನಿಂದ ಗೂಗಲ್ ಪ್ಲಸ್ ನಲ್ಲಿ ಫೋಟೋಗಳನ್ನ ಅಟಾಚ್ ಮಾಡಬಹುದಾಗಿದೆ.
  •  https://drive.google.com/start#home

ಗೂಗಲ್ ಕನ್ನಡ ಭಾಷಾಂತರ ಆಂಡ್ರಾಯ್ಡ್ App

ವಿಶ್ವದ ಇಂಟರ್ನೆಟ್ ದೈತ್ಯ ಅಮೆರಿಕಾದ ಗೂಗಲ್ ಶುರುವಾದಾಗಿನಿಂದ ಹಲವಾರು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ ಇಂಟರ್ನೆಟ್ ಬಳಕೆದಾರರಿಗೆ ಹೊಸ ಹೊಸ ಫೀಚರುಗಳು ಇರುವ ಟೂಲ್ ಗಳನ್ನು ಕೊಡುತ್ತಾ ಬಂದಿದೆ. ತನ್ನ ಗೂಗಲ್ ಲ್ಯಾಬ್ಸ್ ನಲ್ಲಿ ಪ್ರಯೋಗಗಳನ್ನು ಕೈಗೊಂಡು ಹೊಸದೆನಿಸುವ ಫೀಚರುಗಳನ್ನು ಕೊಡುವುದರಲ್ಲಿ ಗೂಗಲ್ ಫೇಮಸ್ ಆಗಿದ್ದು, ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಲು PC ಗಳಲ್ಲಿ ಬಳಸಬಹುದಾದ ಗೂಗಲ್ ಟ್ರಾನ್ಸ್ ಲೇಟ್ ಫೇಮಸ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಈಗ ಇದೇ ರೀತಿಯ ಸೌಲಭ್ಯವನ್ನು ತನ್ನ ತಂತ್ರಾಂಶವಾದ ಆಂಡ್ರಾಯ್ಡ್ ಇರುವ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಿಗೆ ಹೊರತಂದಿದ್ದು, ಸುಮಾರು 64 ಭಾಷೆಗಳ ಶಬ್ದಗಳನ್ನು ಭಾಷಾಂತರ ಮಾಡುವ ಸಾಮರ್ಥ್ಯ ಹೊಂದಿದೆ. ಅದೂ ಅಲ್ಲದೆ 40 ವಿಭಿನ್ನ ಭಾಷೆಗಳನ್ನು  ಮಾತಿನ ಮೂಲಕ ಅರ್ಥ ಮಾಡಿಕೊಂಡು ಅದನ್ನು ನಿಮಗೆ ಬೇಕಾದ ಭಾಷೆಯಲ್ಲಿ ತರ್ಜುಮೆ ಮಾಡಿಕೊಡುವ ವಿಶೇಷತೆ ಈ ಆಪ್ ನಲ್ಲಿದೆ. ಉದಾಹರಣೆಗೆ: ನೀವು ಇಂಗ್ಲಿಷ್ ನಲ್ಲಿ “computer ” ಎಂದು ಟೈಪ್ ಮಾಡಿದರೆ ಅಥವ ಹೇಳಿದರೆ, ಈ ಆಪ್ ನಿಮಗೆ ಕನ್ನಡಲ್ಲಿ ಅದಕ್ಕೆ ಸಮಾನಾರ್ಥಕ ಪದವಾದ “ಗಣಕಯಂತ್ರ” ಎಂದು ಭಾಷಾಂತರಿಸಿ ಕೊಡುತ್ತದೆ.
ಕನ್ನಡ, ಹಿಂದಿ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಪ್ರಮುಖ ವಿದೇಶೀ ಭಾಷೆಗಳಾದ  ಆಫ್ರಿಕಾನ್ಸ್ ಅರೇಬಿಕ್, ಚೀನೀ (ಸರಳ), ಚೀನೀ (ಸಾಂಪ್ರದಾಯಿಕ), ಡ್ಯಾನಿಶ್, ಡಚ್, ಇಂಗ್ಲೀಷ್, ಫ್ರೆಂಚ್, ಫಿನ್ನಿಶ್, ಫಿಲಿಪಿನೋ, ಜರ್ಮನ್, ಗ್ರೀಕ್, ಹೀಬ್ರೂ, ಹಂಗೇರಿಯನ್, ಜಪಾನಿ, ಇಟಾಲಿಯನ್, ಇಂಡೋನೇಷ್ಯನ್, ಐರಿಷ್, ಕೊರಿಯನ್, ಲ್ಯಾಟಿನ್, ಮಲಯ, ನಾರ್ವೇಜಿಯನ್, ಪರ್ಷಿಯನ್, ಪೋಲಿಷ್,  ಪೋರ್ಚುಗೀಸ್, ರೊಮಾನಿಯನ್, ಸ್ಲೊವೇನಿಯನ್, ರಶಿಯನ್, ಸರ್ಬಿಯನ್, ಸ್ಲೋವಾಕ್, ಸ್ಪಾನಿಷ್, ಸ್ವೀಡಿಷ್, ಥಾಯ್, ಟರ್ಕಿಷ್, ಉಕ್ರೇನ್, ಉರ್ದು ಭಾಷೆಗಳಿಗೆ ಭಾಷಾಂತರ ಮಾಡುತ್ತದೆ.
ಬೇರೆ ರಾಜ್ಯಗಳಿಗೆ ಹೋಗುವ ಅಥವಾ ವಿದೇಶಗಳಿಗೆ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ, ಪ್ರವಾಸಿಗಳಿಗೆ ಹಾಗು ವ್ಯಾಪಾರ ಮಾಡಲು ಹೊಗುವವರಿಗೆ ಈ ಆಪ್ ತುಂಬಾ ಅನುಕೂಲಕರವಾಗಿದ್ದು ಈ ಉಚಿತ ಆಪ್ ಅನ್ನು ಗೂಗಲ್ ಪ್ಲೇ ವೆಬ್ಸೈಟಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. http://goo.gl/awuXb

Friday, June 29, 2012

ಗೂಗಲ್ ಟ್ಯಾಬ್ಲೆಟ್

ಗೂಗಲ್ ತನ್ನ ಅತಿ ನಿರೀಕ್ಷಿತ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ 7 ಇಂಚ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.
ನೆಕ್ಸಸ್ 7 ಎಂದು ಹೆಸರಿಡಲಾಗಿರುವ ಈ ಟ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್ ನ ಹೊಸ ಆವೃತ್ತಿ ಜೆಲ್ಲಿ ಬೀನ್ ಇರಲಿದ್ದು, 199 ಡಾಲರ್ ಗೆ ಬಿಡುಗಡೆಯಾಗಿದೆ. (ಅಂದಾಜು 11 ಸಾವಿರ ರೂಪಾಯಿ).
ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾ ದೇಶಗಳಲ್ಲಿ ಆನ್ಲೈನ್ ಬಕಿಂಗ್ ಶುರುವಾಗಿದ್ದು ಜುಲೈ ಮಧ್ಯಭಾಗದ ವೇಳೆಗೆ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಒಂದು ಕಡೆ ಆಪಲ್ ನ ಟ್ಯಾಬ್ಲೆಟ್, ಐಪ್ಯಾಡ್ ಬೆಲೆ ಶುರುವಾಗುವುದೇ 499 ಡಾಲರ್ ನಿಂದ. ಐಪ್ಯಾಡ್ 2 ಕೂಡ 25 ಸಾವಿರಕ್ಕೆ ಕಡಿಮೆ ಇಲ್ಲದ ಕಾರಣ ಗೂಗಲ್ ನ ನೆಕ್ಸಸ್ ಟ್ಯಾಬ್ಲೆಟ್ ಖಂಡಿತವಾಗಿಯೂ ಆಪಲ್ ಹಾಗು ಅಮೆಜಾನ್ ಕಿಂಡಲ್ ಟ್ಯಾಬ್ಲೆಟ್ ಬುಡಕ್ಕೆ ಸೈಲೆಂಟ್ ಆಗಿ ಬಿಸಿ ಮಾಡುವುದಂತೂ ಗ್ಯಾರಂಟಿ.
ನೆಕ್ಸಸ್ 7 ನ ವಿಶೇಷತೆಗಳು ಗೊತ್ತಾ:
  • ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶ
  • 7 ಇಂಚ್ ನ HD ಸ್ಕ್ರೀನ್
  • 1280×800 ಪಿಕ್ಸೆಲ್ ರೆಸಲ್ಯೂಶನ್ IPS ಡಿಸ್ಪ್ಲೇ
  • 1.3 GHz ಕ್ವಾಡ್ ಕೋರ್ ಟೆಗ್ರಾ 3 ಪ್ರೋಸೆಸರ್
  • GeForce 12 ಕೋರ್ ಗ್ರಾಫಿಕ್ಸ್
  • 1 GB ರಾಮ್
  • ವಾಯ್ಸ್ ಸರ್ಚ್
  • 1.2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ
  • ವೈಫೈ, ಬ್ಲೂಟೂತ್ ಹಾಗು NFC (ನಿಯರ್ ಫೀಲ್ಡ್ ಕನೆಕ್ಟಿವಿಟಿ)
  • 9 ಗಂಟೆ ಬ್ಯಾಟರಿ ಬ್ಯಾಕಪ್
  • 300 ಗಂಟೆ ಸ್ಟಾಂಡ್ ಬೈ
  • 340 ಗ್ರಾಂ ತೂಕ
  • ಗೂಗಲ್ ಪ್ಲೇ ಸಂಪರ್ಕ (ಆಂಡ್ರಾಯ್ಡ್ ಆಪ್ ಗಳಿಗೆ)
 11 ಸಾವಿರಕ್ಕೆ ಬರುವ ಈ ಟ್ಯಾಬ್ಲೆಟ್ ಅನ್ನು ತೈವಾನ್ ನ ಅಸೂಸ್ ಉತ್ಪಾದನೆ ಮಾಡಿದ್ದು, ಸರಕಾರದ ಆಕಾಶ್ 2 ಅಗ್ಗದ ಟ್ಯಾಬ್ಲೆಟ್ ಬರುವುದಕ್ಕೆ ಕಾದು, ಕೊಳ್ಳುವ ಬದಲು ಭಾರತೀಯ ಗ್ರಾಹಕರು ಇನ್ನೆರಡು ವಾರ ಇದಕ್ಕೆ ಕಾದು ಉತ್ತಮವಾದ ನೆಕ್ಸಸ್ 7 ಕೊಳ್ಳುವುದು ಒಳಿತು. ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ: http://www.google.com/nexus/#/7
Related Posts Plugin for WordPress, Blogger...

Wednesday, June 27, 2012

ಆನ್‌ಲೈನ್‌ನಲ್ಲಿ ಭವಿಷ್ಯ ನಿಧಿ ಮಾಹಿತಿ ಪಡೆಯುವುದು ಹೇಗೆ?

ಭವಿಷ್ಯ ನಿಧಿ (Employees' Provident Fund) ಖಾತೆಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಅದರಲ್ಲಿ ನಿಮ್ಮ ಕಾಣಿಕೆ ಎಷ್ಟು, ಉದ್ಯೋಗದಾತರ ಕೊಡುಗೆ ಎಷ್ಟು? ಎಂಬ ವಿಷಯಗಳು ನಿಮಗೆ ತಿಳಿದಿದೆಯಾ? ಹೋಗಲಿ, ನಮ್ಮ ಖಾತೆಯಲ್ಲಿ ಎಷ್ಟು ಉಳಿತಾಯವಾಗಿದೆ, ಎಲ್ಲಿ ಈ ವಿಷಯಗಳನ್ನೆಲ್ಲ ತಿಳಿದುಕೊಳ್ಳಬೇಕು ಎಂಬುದಾದರೂ ತಿಳಿದಿದೆಯಾ?

ಇನ್ನು ಮುಂದೆ ಭವಿಷ್ಯ ನಿಧಿ(ಎಂಪ್ಲಾಯೀಸ್ ಪ್ಲಾವಿಡೆಂಟ್ ಫಂಡ್)ಯ ಬಗ್ಗೆ ತಿಳಿದುಕೊಳ್ಳಲು ಪಿಎಫ್ ಕಚೇರಿಗೆ ಎಡತಾಕುವ ಅಗತ್ಯವಿಲ್ಲ. ಇಂಟರ್ನೆಟ್ ಸಂಪರ್ಕವಿದ್ದರೆ ಇದ್ದಲ್ಲಿಂದಲೇ ಆನ್ ಲೈನ್ ಮುಖಾಂತರವೇ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. www.epfindia.com ಅಂತರ್ಜಾಲ ತಾಣ ಜಾಲಾಡಿ ನಮಗೆ ಅಗತ್ಯವಿರುವ ಸೇವೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ನಿಮ್ಮ ಖಾತೆಯಿರುವ ಪ್ರಾದೇಶಿಕ ಪಿಎಫ್ ಕಚೇರಿಯನ್ನು ಆಯ್ಕೆ ಮಾಡಿಕೊಂಡು, ಯಾವುದೇ ನೊಂದಾವಣೆ ಕೂಡ ಇಲ್ಲದೆ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಏನಾದರೂ ಕುಂದುಕೊರತೆಗಳಿದ್ದರೆ ವೆಬ್ ಸೈಟಿನಲ್ಲಿ ನೊಂದಾಯಿಸಿಕೊಂಡು ತೊಂದರೆಗಳನ್ನು ನಿವೇದಿಸಿಕೊಳ್ಳಬಹುದು.

ಮೊಬೈಲ್ ಸಂದೇಶ : ನಮ್ಮ ಖಾತೆಯಲ್ಲಿ ನಮೂದಿಸಲಾಗಿರುವ ಸರಿಯಾದ ಇಪಿಎಫ್ ನಂಬರ್ ತಿಳಿಸಿ ಮೊಬೈಲ್ ಮುಖಾಂತರವೂ ನೌಕರರ ಮತ್ತು ಮಾಲಿಕರ ಕೊಡುಗೆ ಎಷ್ಟು, ಮತ್ತು ಎಷ್ಟು ಜಮಾ ಆಗಿದೆ ಎಂಬ ವಿವರಗಳನ್ನು ಪಡೆಯಬಹುದು. ದೇಶದಲ್ಲಿರುವ 120 ಪಿಎಫ್ ಕಚೇರಿಗಳಲ್ಲಿ 112 ಕಚೇರಿಗಳು ಆನ್ ಲೈನ್ ಮೂಲಕ ಮಾಹಿತಿಯನ್ನು ನೌಕರರಿಗೆ ನೀಡುತ್ತಿವೆ. ಅದನ್ನು ಪಡೆಯುವ ಬಗೆ ನೌಕರರಿಗೆ ತಿಳಿದಿರಬೇಕು ಮತ್ತು ಅಂತರ್ಜಾಲ ಬಳಸುವ ಬಗೆ ಗೊತ್ತಿರಬೇಕು.

"ಸ್ಪರ್ಶ" ಮೂಲಕ ಕಾಪಿ ಮಾಡಿ!

ಒಂದು ಸಾಧನದಿಂದ ಕಡತಗಳನ್ನು ಇನ್ನೊಂದು ಸಾಧನಕ್ಕೆ ನಕಲು ಮಾಡುವುದು ತ್ರಾಸದಾಯಕವೇ ಸರಿ.ಬ್ಲೂಟೂತ್,ನಿಸ್ತಂತು ಸಂಪರ್ಕಗಳ ಮೂಲಕ ಈ ಕ್ರಿಯೆ ಸಾಕಷ್ಟು ಸರಳವಾಗಿದೆ.ಜತೆಗೆ ಆಂಡ್ರಾಯಿಡ್ ಅಪ್ಲಿಕೇಶನ್‌ಗಳನ್ನು ಡೆಸ್ಕ್‌ಟಾಪ್ ಕಂಪ್ಯೂಟರಿನಲ್ಲಿ ಇಳಿಸಿಕೊಂಡು,ತನ್ನ ಮೊಬೈಲ್ ಸಾಧನದಲ್ಲಿ ಅನುಸ್ಥಾಪಿಸಲು ಅನುವು ಮಾಡುವಂತಹ ಅನುಕೂಲತೆಗಳೂ ಈಗ ಲಭ್ಯ.ಸ್ಪರ್ಶ ಸಂವೇದಿ ತೆರೆಯುಳ್ಳ ಸಾಧನಗಳಲ್ಲಿ ಬಳಸಲು ತಂತ್ರಾಂಶವನ್ನು ಎಂಐಟಿಯ ಖ್ಯಾತ ಸಂಶೋಧಕ ಪ್ರಣವ್ ಮಿಸ್ತ್ರಿ ಸಿದ್ಧ ಪಡಿಸಿದ್ದಾರೆ. "ಸ್ಪರ್ಶ" ಎಂದೇ ತಂತ್ರಾಂಶದ ಹೆಸರು.ಇದನ್ನು ಎರಡೂ ಸಾಧನದಲ್ಲಿ ಅಳವಡಿಸಿಕೊಳ್ಳಬೇಕು.ಎರಡೂ ಸಾಧನದಲ್ಲಿ ಒಂದೇ ಫೋಲ್ಡರ್ ಬಳಸುತ್ತಿರಬೇಕು.ಆಗ ಒಂದು ಸಾಧನದ ತೆರೆಯನ್ನು ಸ್ಪರ್ಶಿಸುವ ಮೂಲಕ,ಕಡತವನ್ನು ಕಾಪಿ ಮಾಡಿಕೊಂಡು,ಅದನ್ನು ನಮ್ಮ ದೇಹದಲ್ಲಿ ಧರಿಸಿದೆವೆಯೋ ಎನ್ನುವಂತ ಪರಿಣಾಮ ಉಂಟು ಮಾಡಬೇಕು.ನಂತರ ಇನ್ನೊಂದು ಸಾಧನದ ತೆರೆಯನ್ನು ಮುಟ್ಟಿದರೆ ಸರಿ,ಕಡತ ಅಲ್ಲಿಗೆ ವರ್ಗಾವಣೆಯಾಗಲಾರಂಭಿಸುತ್ತದೆ.ಮನುಷ್ಯ-ಕಂಪ್ಯೂಟರ್ ನಡುವಣ ಸಂವಹನವನ್ನು ಸಲೀಸುಗೊಳಿಸಲು ಪ್ರಣವ್ ಮಿಸ್ತ್ರಿ ಇಂತಹ ಅನೇಕ ಯೋಜನೆಗಳನ್ನು ಟೆಡೆಕ್ಸ್ ಎನ್ನುವ ಸಮಾವೇಶದಲ್ಲಿ ಸೋದಾಹರಣವಾಗಿ ತೋರಿಸಿ,ಯುವಜನರ ಕಣ್ಮಣಿಯಾಗಿರುವುದು ನಿಮಗೆ ತಿಳಿದೇ ಇದೆ.ಈ ತಂತ್ರಾಂಶವನ್ನು ಆಪರೇಟಿಂಗ್ ವ್ಯವಸ್ಥೆಯ ತಂತ್ರಾಂಶದ ಭಾಗವಾಗಿಸಿ,ನಕಲು ಮಾಡುವುದನ್ನು ಸುಲಭವಾಗಿಸಬಹುದು ಎಂಬುದು ಮುಂದಿನ ಯೋಜನೆ.